Wednesday, January 16, 2013

ಬಹುರೂಪಿ ನಾಟಕಗಳು


        ಕಳೆದ ಒಂದು ವಾರ ಬಹುರೂಪಿ ನಾಟಕಗಳು ರಂಗಾಯಣ ಮೈಸೂರ್ ನಲ್ಲಿ ಇತ್ತು. ಯಾವುದಾದರೊಂದು ದಿನ ಹೋಗೋಣ ಅಂತ ಅಂದು ಕೊಳ್ಳೋದ್ರೊಳಗೆ ಮುಗಿಯೋ ದಿನ ಹತ್ತಿರ ಬಂದುಬಿಟ್ಟಿತ್ತು.ಮುಗಿಯುವ ದಿನದ ಹಿಂದಿನ ದಿನ ಹೋಗಿಬಿಡೋಣ ಅಂತ ತೀರ್ಮಾನಿಸಿ ಯಾವ ನಾಟಕ ಅಂತ ಪೇಪರ್ ನೋಡಿದ್ರೆ ನಮಗೆ ಬೇಕಾದ ೬ ಗಂಟೆಯ ಶೋ ನಲ್ಲಿ ಯಾವುದೊ ಮಲಯಾಳಂ ಇತ್ತು . ರಾಮಧಾನ್ಯ ಅನ್ನೋ ನಾಟಕ ೩:೩೦ ಕ್ಕೆ ಮತ್ತು ನೀರು ಅನ್ನೋ ನಾಟಕ ೭ ಗಂಟೆಗೆ ಇತ್ತು .ಆದರೆ ಅದರ ಪಕ್ಕಕ್ಕೆ ಹಿಂದಿನ ದಿನದ ನಾಟಕಕ್ಕೆ ಟಿಕೆಟ್ ಸಿಗಲಿಲ್ಲ ಅನ್ನೋದು ಇದ್ದಿದ್ರಿಂದ ಡೌಟ್ ಆಯ್ತು  ಇವತ್ತು ನಮಗೆ ಸಿಗೋದ್ ಕಷ್ಟ ಅಂತ ಏಕೆಂದರೆ ಅವತ್ತು ಸಂಡೇ !! ಅಪ್ಪ ಅವರ ಸ್ನೇಹಿತರಿಗೆ (ಅವರು ರಂಗಾಯಣದಲ್ಲಿ ತುಂಬಾ ನಾಟಕಗಳನ್ನು ಮಾಡಿದವರು ) ಫೋನ್ ಮಾಡಿ ಟಿಕೆಟ್ ಸಿಗಬಹುದ ಅಂತ ವಿಚಾರಿಸಿದರೆ ಅವ್ರು ೭ ಗಂಟೆದಕ್ಕೆ ಕಷ್ಟ ೩:೩೦ ಕ್ಕೆ ಇರೋದಕ್ಕೆ ಸಿಗುತ್ತೆ ಬಂದ್ಬಿಡಿ ಅಂದ್ರು.. ಆದ್ರು  ಅನುಪ್ ನ ನಾಟಕದ ಸರ್ ಗು ಫೋನ್ ಮಾಡಿ ಇವತ್ತು ಹೋಗೋಣ ಅಂತ ಇದೆ ಟಿಕೆಟ್ ವ್ಯವಸ್ತೆ ಎಲ್ಲ ಹೇಗೆ ಅಂತ ಕೇಳಿದ್ರೆ  ಅವರು ಡೆಲ್ಲಿಗೆ ಹೊರಟ್ಟಿದ್ದಾರೆ ಅವತ್ತೇ.ಟಿಕೆಟ್ ಸಿಗ್ಲಿಲ್ಲ ಅಂದ್ರೆ ಆಫೀಸ್ ನಲ್ಲಿ ಒಬ್ಬರಿರ್ತಾರೆ ಅವರನ್ನ ಒಂದು ಸಲ ವಿಚಾರ್ಸು ಸಿಗಬಹುದು ಅಂದ್ರು. ಅಷ್ಟೋತ್ತಿಗೆ ೨:೩೦ ಆಗಿ ಹೋಗಿತ್ತು. ಬೇಗ ಬೇಗ ರೆಡಿ ಆಗಿ ೩:೦೦ ಗೆ ಮನೆ ಇಂದ ಹೊರಟ್ವಿ. ಅಲ್ಲಿ ಹೋಗಿ ನೋಡಿದ್ರೆ ಎಷ್ಟೊಂದು ಕಾರುಗಳು ರೋಡಿನ ಆ ಬದಿ ಈ ಬದಿಗೆಲ್ಲ. ಅಲ್ಲೇ ಇದ್ದ ಒಂದು ಜಾಗದಲ್ಲಿ ನಿಲ್ಲಿಸಿ ಒಳಗೆ ಹೋಗುತ್ತಿದ್ದಂತೆ ಯಾರೋ ಸ್ಟಾಲ್ ಲಿ ಇದ್ದೋರು ತುಂಬಾ ದಿನದ ಪರಿಚಯದಂತೆ ಆರಾಮ ? ಅಂದ್ರು ಅಪ್ಪ  ನಿಮ್ದು  ಇದ್ದ  ನಾಟಕ ಕೇಳಿದ್ದಕ್ಕೆ  ಬಡಾವಣ ಬಹುರೂಪಿ ಅಂತ ಪ್ರತಿ ಏರಿಯ ದಲ್ಲೂ ಮಾಡ್ತಾ ಇದ್ಯ ಅಂದ್ರು. ಆಮೇಲೆ ತಿಳೀತು ನಮ್ಮ ಏರಿಯ ದಲ್ಲೂ ೨ ದಿನ ಬಡಾವಣ ಯಕ್ಷಗಾನ ನಡೆದಿದ್ದು ಇವರದ್ದೇ ಅಂತ .ಸ್ವಲ್ಪ ಮಾತಾಡಿ ಎಲ್ಲಿ ಟಿಕೆಟ್ ತಗೊಳ್ಬೇಕು ಕೇಳಿ ಆಕಡೆ ಹೋಗೋವಾಗ ಯಾರವರು ಅಂತ ಕೇಳಿದ್ರೆ ನಂಗೇನ್ ಗೊತ್ತು ಅಂತಿದಾರೆ !!ಅಲ್ಲೇ ಪಕ್ಕದಲ್ಲಿ ಒಬ್ಬ ಕಲಾವಿದ ಬಿಡಿಸಿದ ೩ಡಿ  ಕಪ್ಪೆ ಇತ್ತು ಅದು ಬರಿ ಕಣ್ಣಿನಿಂದ ನೋಡಿದ್ರೆ ಏನೋ ಚಿತ್ರ ಅಂತ ಅನಿಸ್ತಿತ್ತೆ ಹೊರತು ಕಪ್ಪೆ ಅನ್ನೋದು ಗೊತ್ತಾಗ್ತಿರ್ಲಿಲ್ಲ .

 
ಕ್ಯಾಮರಾ ದಿಂದ ಒಂದು angle ಇಂದ ತೆಗೆದರೆ ಕಪ್ಪೆ ಅನ್ನೋದು ಸ್ಪಷ್ಟ ವಾಗಿ ಗೊತಾಗ್ತಿತ್ತು . 
 
ಅದರ ಫೋಟೋ ತೆಗೆದು ಕೊಂಡು ಟಿಕೆಟ್ ಕೌಂಟರ್ ಗೆ ಹೋಗಿ ಟಿಕೆಟ್ ತೆಗೆದು ಕೊಂಡು (ಟಿಕೆಟ್ ಇತ್ತು ಸದ್ಯ ) ಒಳಗೆ ಹೋಗಿ ನಮ್ಮ ಜಾಗದಲ್ಲಿ ಕುಳಿತಾಯ್ತು. ೩:೪೦ ಕ್ಕೆ ರಾಮಧಾನ್ಯ ನಾಟಕ ಶುರುವಾಯ್ತು . ಅದರಲ್ಲಿ ಕಾಳಿದಾಸ ಕೃಷ್ಣ ದೇವಾಲಯಕ್ಕೆ ಬಂದಿದ್ದನೆಂದು ಅಲ್ಲಿನ ಬ್ರಾಹ್ಮಣರು ಅವರನ್ನು ಹೊರಗೆ ದಬ್ಬಿ  ಬೈದಿದ್ದರಿಂದ ಹಿಡಿದು ರಾಮ ರಾಗಿಯನ್ನು ಇಷ್ಟ ಪಟ್ಟಿದ್ದರಿಂದ ರಾಘವ ಅಂತ ಹೆಸರು ಬಂತು ಎಂದು ತಮಾಷೆಯಾಗಿ ಎನ್ನುವುದರೊಂದಿಗೆ ನಾಟಕ ೫ ಗಂಟೆಗೆ ಮುಗಿದಿತ್ತು ..ಅಲ್ಲೇ ಪಕ್ಕದಲ್ಲಿ ಬೀದಿ ನಾಟಕ ನಡಿತಿತ್ತು ಅದರ ಒಂದು ತುಣುಕು ಈ ಕೆಳಗೆ ಮಜವಾಗಿದೆ ಈ ನಾಟಕ ಮುಗಿದಮೇಲೆ ಕಳಾರಿಪಯಟ್ ಅನ್ನೋ ಬೆಂಕಿಯ ಸಾಹಸ ಇತ್ತು ಅದನ್ನು ನೋಡಿ ಪಕ್ಕದಲ್ಲೇ ಇದ್ದ ಸ್ಟಾಲ್ ಗಳನ್ನೆಲ್ಲ ಸುತ್ತಾಡಿ  ಮನೆಗೆ  ಬಂದ್ವಿ ..

Sunday, November 4, 2012

ತಲೆನೋವು ಬಹಿಷ್ಕಾರ ಹಾಕಿದ ಹಾಗೆ ಎಲ್ಲೋ ಹೋಗಿಬಿಟ್ಟಿದೆ

     ಒಂದು ಕಾಯಿಲೆ ಬಂದರೆ ಇದೊಂದು ಬಿಟ್ಟು ಬೇರೆ ಯಾವ ಕಾಯಿಲೆ ಬಂದರು ತಡೆದು ಕೊಳ್ಳ ಬಹುದಿತ್ತು ಎನಿಸುತ್ತದೆ. ಮನುಷ್ಯನ ಮನಸ್ಥಿತಿಯೇ ಅಂತದ್ದು. ಬೇಸಿಗೆ ಕಾಲ ಬಂದರೆ ಮಳೆಗಾಲ, ಮಳೆಗಾಲ ಬಂದರೆ ಚಳಿಗಾಲ ಆಗಿದ್ದರೆ ಚನ್ನಾಗಿರುತ್ತಿತ್ತು  ಅಂದುಕೊಂಡ ಹಾಗೆ. ಇಲ್ಲಿ ನನಗೆ ಕಾಡುತ್ತಿದ್ದುದು ಸುಮಾರು ವರ್ಷದಿಂದ ತಲೆನೋವು. ಇದು ತಲೆ ಮೇಲೆ ನೋವು ಅಥವಾ ಹಣೆ ಮೇಲೆ ನೋವು ಬರುವಂತದ್ದಲ್ಲ. ಮೂಗಿನ ಸಂದು ಮತ್ತು  ಹಣೆ ಸಂದು ಕೂಡುವ ಜಾಗದಲ್ಲಿ. ಏನೋ ಒಂದು ತರಹ ಕಫ ಒಳಗೆ ಇದ್ದಂತೆ ಮುಟ್ಟಿದರೆ ಹುಬ್ಬಿನ ಸಂದು ದಪ್ಪ ಎನಿಸುತ್ತಿತ್ತು. ಇದಕ್ಕೊಂದು ಇತಿ ಮಿತಿ ಅನ್ನೋದಿಲ್ಲ ಬಂದರೆ ಒಂದು ವಾರ ಆದರು ಹೋಗೋದಿಲ್ಲ. ಕೆಲವೊಂದು ಮುಜುಗರ  ಮಾಡೋ ನೆಂಟರು ಮನೆಗೆ ಬಂದು ಒಂದು ವಾರ ಉಳಿದರೆ ಹೇಗಾಗತ್ತೋ  ಹಾಗನಿಸ್ತಿತ್ತು ಈ ತಲೆ ನೋವು. ಕೆಲವೊಂದು ಸಲ ಬೆಳಗ್ಗೆ ಶುರು ವಾದ ತಲೆ ನೋವು ಸಂಜೆ ಕಮ್ಮಿ ಆಗಿ ಮರುದಿನ ಬೆಳಗ್ಗೆ ಮತ್ತೆ ಅದೇ ಸಮಯಕ್ಕೆ ಶುರುವಾಗೋ ತರದ್ದು . ಇದೊಳ್ಳೆ ಕಾಲೇಜ್ ಗೆ ಹೋಗಲೇಬೇಕು ಅಂತ ಕಟ್ಟುಪಾಡು ಹಾಕಿದಾರೆ ಅಂತ ಹೋಗ್ತಿವಲ್ಲ ಆತರ ಯಾರೋ ಕಟ್ಟುಪಾಡು ಹಾಕಿದಾರೆ ಅನ್ನೋ ಹಾಗೆ ಅದೇ ಸಮಯಕ್ಕೆ ಬರೋದು. ಕೆಲವೊಂದು ಸಲ ತಡೆಯಲಾಗದೆ ಕ್ಲಾಸ್ ನಲ್ಲಿ ಮಲಗಿ ಸರಿಯಾಗಿ ಉಟ  ಮಾಡಲ್ಲ ಏನಿಲ್ಲ ಇನ್ನೇನಾಗತ್ತೆ  ಅಂತ ಬೈಸಿಕೊಂಡಿದ್ದು ಇದೆ. ಅನುಭವಿಸೋರ ಕಷ್ಟ ಅವರಿಗೇನು ಗೊತ್ತು ಬೈಯೋದು ಬಿಟ್ಟು.

ಅತ್ತೆಗೆ ಯಾವುದೊ ಕಾರಣಕ್ಕೆ ಡಾಕ್ಟರ್ ಹತ್ತಿರ ಹೋಗೋ ಕೆಲಸ ಇತ್ತು .ಆ ಡಾಕ್ಟರ್ ನಾಡಿ ನೋಡಿನೇ ನಮಗೇನು ಕಾಯಿಲೆ ಇದೆ ಅಂತ ಗುರುತಿಸುವವರು. ಅದು ಅವರು ಬೆಂಗಳೂರಿನಿಂದ ವಾರಕ್ಕೆ ಒಂದು ಸಲ ಮೈಸೂರ್ ಗೆ ಬರೋದು. ಮೊದಲೇ ಅವರಲ್ಲಿ ಫೋನ್ ನಲ್ಲಿ ಮಾತಾಡಿ 9:30 ಕ್ಕೆ ಹೋದರೆ ಒಳಗೆ ಹೋಗಲು ಆಗೋದು 1:30 ಕ್ಕೆ.ಅಷ್ಟು ಉದ್ದದ ಕ್ಯು .ಅದು ಅವರ ಶಾಪ್ ಇದ್ದಿದ್ದು ಯಾವುದೊ ಗಲ್ಲಿಯಲ್ಲಿ. ಒಂದು ಚಿಕ್ಕ ಕೋಣೆ ಯನ್ನು ಬಾಡಿಗೆಗೆ ಪಡೆದು ಮಾಡುತ್ತಿದ್ದುದು.ಹೊರಗೆ ಕಾಯುತ್ತಿದ್ದವರು ಬಿಸಿಲಿನ ತಾಪಕ್ಕೆ ಸುಸ್ತಾಗಿ ಹೋಗಬೇಕಿತ್ತು. ಅವಳ ಜೊತೆ ಸುಮ್ಮನೆ ಹೋಗಿದ್ದೆ ನಾನು.ಕಾದು ಕಾದು ಸುಸ್ತಾಗಿ ತಲೆ ನೋವಿನ ಮಹಾಶಯನು ಅದೇ ಸಮಯಕ್ಕೆ ಬಂದುಬಿಟ್ಟ. ತಲೆ ನೋವಿಗೆ ಡಾಕ್ಟರ್ ಹತ್ತಿರ ತೋರಿಸೋಣ ಅನಿಸಿದ್ದೇ ಅವಾಗ.

1:30 ಕ್ಕೆ ಅಂತು ಇಂತೂ ಒಳಗಡೆ ಹೋಗಿ ಆಯ್ತು. ಅತ್ತೆಗೆ ಬೇಕಾದ ಮಾತ್ರೆಗಳನ್ನೆಲ್ಲ ಕೊಟ್ಟ ಮೇಲೆ ನನ್ನ ನೋಡಿ ಏನಮ್ಮ ಇಷ್ಟೊಂದ್ ದಪ್ಪ ಇದ್ದೀಯ ಅಂದ್ರು.ಅದಕ್ಕೆ ಸಣ್ಣ ಆಗಲು ಏನಾದರು ಮಾತ್ರೆ ಇದ್ದರೆ ಕೊಡುತ್ತಿರೆನೋ ಅಂತ ಬಂದೆ ಅಂದೆ. ನಕ್ಕು ನೀನು ಮುಂದಿನ ಸಲ ಬರೋದ್ರೊಳಗೆ ಈ ಬಾಗಿಲಿನ ಅರ್ಧದಷ್ಟು ಆಗಿರ್ತಿಯ ಅಂತ ಎದುರಿಗಿನ ಬಾಗಿಲು ತೋರ್ಸಿ. ಯಾವುದೋ ಚೂರ್ಣ ಕೊಟ್ರು ಒಂದು ತಿಂಗಳು ತಗೋ ಅಂತ . ಆ ಚೂರ್ಣ ನೋ ತಿಂದಷ್ಟು ತಿನ್ನಬೇಕು ಎನಿಸುವಂತದ್ದು. ಉತ್ತುತ್ತೆ, ತುಪ್ಪ, ಸಕ್ಕರೆ ಎಲ್ಲ ಹಾಕಿ ಮಾಡಿದ್ದು .ಒಂದೇ ತಿಂಗಳಲ್ಲಿ 2 ಬಾಟಲಿ ಕಾಲಿ  ಮಾಡಿದ್ದೆ.(ಆದರು ವ್ಯತ್ಯಾಸವೇನಿಲ್ಲ). ಹಾಗೆ  ನಾಡಿ ಪರೀಕ್ಷೆ ಮಾಡಿ ತಲೆನೋವು ಏನಾದ್ರು ಇದ್ಯ ಅಂದ್ರು . ಹೌದು ಎಂದೆ. ಅದಕ್ಕೆ ಕೊಟ್ಟ ಔಷಧಿ ತುಂಬಾ ಪರಿಣಾಮಕಾರಿ ಆಯ್ತು . ಎರಡು ತಿಂಗಳು ತಗೊಂಡೆ ತಲೆನೋವು ಊರೊಳಗೆ ಬರೋ ಹಾಗಿಲ್ಲ ಅಂತ ಬಹಿಷ್ಕಾರ ಹಾಕಿದ ಹಾಗೆ ಎಲ್ಲೋ ಹೋಗಿಬಿಟ್ಟಿದೆ. ನಿಮಗೂ ಈ ತರಹದ ತಲೆನೋವಿದ್ದರೆ ಮಾಡಿ ನೋಡಿ.
1.ಸಾಂಬಾರ್ ಈರುಳ್ಳಿ ಅಂತ ಸಣ್ಣದು ಸಿಗುತ್ತಲ ಅದನ್ನು ಬೆಳಗ್ಗೆ ಮತ್ತು ರಾತ್ರೆ ತಲಾ ಒಂದರಂತೆ 2 ತಿಂಗಳ ಕಾಲ ತಿನ್ನಬೇಕು.

2.  25ml ಎಣ್ಣೆ
     1 ಕಾಳು ಸಾಸಿವೆ 
     1 ಕಾಳು ಮೆಂತ್ಯೆ 
     1 ಕಾಳು ಜೀರಿಗೆ 
     1 ಕಾಳು ಕಾಳುಮೆಣಸು 
     1 ಕಾಳು ಕೊತ್ತಂಬರಿ
ಎಣ್ಣೆಗೆ ಸಾಸಿವೆ, ಮೆಂತ್ಯೆ, ಜೀರಿಗೆ, ಕೊತ್ತಂಬರಿ ಮತ್ತು ಕಾಳು ಮೆಣಸು ಹಾಕಿ ಕುದಿಸಿ ತಣಿಸಬೇಕು.ಅಷ್ಟು ತಣಿದ ನಂತರ ಮತ್ತೆ ಕುದಿಸಬೇಕು. ಹೀಗೆ 6 ಸಲ ಮಾಡಿ ಡಬ್ಬ ದಲ್ಲಿ ಹಾಕಿಟ್ಟು ಕೊಂಡು ಬೆಳಗ್ಗೆ ಮತ್ತು ರಾತ್ರೆ ಮೂಗಿಗೆ ಒಂದು ಡ್ರಾಪ್ ಎರಡು ತಿಂಗಳ ಕಾಲ ಬಿಟ್ಟು ಕೊಂಡರೆ ತಲೆ ನೋವು ಬರೋದಿಲ್ಲ. ಮಧ್ಯ ಬಂತು ಎಂದರು ಈ ಎಣ್ಣೆಯನ್ನು ಮಾಡಿ ಬಿಟ್ಟರೆ ಮರುದಿನವೇ ವಾಸಿ ಆಗುತ್ತೆ.

Monday, October 15, 2012

ನಕ್ಕು ಬಿಡು..!1...ಹಾಲು ಮಾರೋ ಚೆನ್ನಿ  :  ನಮ್ ಎಮ್ಮೆ ೧ ಸೇರ್ ಹಾಲ್ ಕೊಡ್ತೈತೆ. ಅದ್ರಲ್ಲಿ ಅಚೆಮನೆ ಹೆಗ್ಡೆರಿಗ್ ಅರ್ದ ಸೇರ್ ಕೊಟ್ಟಿನೆ. ನಮ್ ಮಗ್ಳಿಗ್ ಬೇಕು ಅಂತ ಅರ್ದ ಸೇರ್ ಇಟ್ಕಂಡಿನಿ..
ಮತ್ತೆ ಅಚಿಮನಿ ಮಗಿಗ್ ಹುಷಾರಿಲ್ಲ ಅಂತ ಅರ್ದ ಸೇರ್ ಇಗಷ್ಟೇ ಕೊಟ್ಬಂದ್ನಿ...
ಇವಾಗ್ ನಿಮ್ಗೆಷ್ಟು ಹಾಲ್ ಬೇಕು ಹೇಳ್ರಿ ...


2...ಚೆನ್ನಿ ಅಡಿಕೆ ಸುಲಿಯೋಳು ಪಕ್ಕದಲ್ಲಿ ಕುತ್ತಿದ್ ಹೆಗ್ಗಡತಿ ಹತ್ರ ನಮ್ಮ ಮನೆಲು ನಿಮ್ಮ ಮನೆಲೆಲ್ಲ ಮಾಡೋ ಹಾಂಗೆ ಭಾರತ್ ವಡೆ ಮಾಡ್ತಾರೆ ಅಂದ್ಲು...
 ಹೆಗ್ಗಡತಿಗೆ ಆಶ್ಚರ್ಯ ಏನಿದು ಭಾರತ್ ವಡೆ ಅಂದ್ರೆ ನಮ್ಮನೆಲೆಲ್ಲ ಮಾಡ್ತಾರೆ ಅಂತಿದಾಳಲ್ಲ ಏನಾದ್ರೂ ಸ್ವೀಟ್ ಇರಬೋದಾ ಅಂತ ತಲೆಕೆಡ್ಸ್ಕಂಡು ಸಾಕಾಗಿ ಕೇಳೇಬಿಟ್ಲು ಹಂಗಂದ್ರೆ ಏನೇ ಚೆನ್ನಿ ಅಂತ..
ಅದೇ ಹುಟ್ಟಿದ್ ದಿನ ಅದೇನೋ ದೀಪ ಹಚ್ಚಿ ಮಾಡದಿಲ್ಲ ಅದೇಯ ಅಂದಾಗ ಹೆಗ್ಗಡತಿಗೆ ಬರ್ತ್ ಡೇ ಅಂತ ಗೊತ್ತಾಗಿ ಬೇಸ್ತು..

Saturday, July 21, 2012

ನಗೋಕೆ ಶುರು ಕಳೆದುಹೋದ ಹುಡುಗಿ!!!

            ತಮ್ಮನ ಉಪನಯನದ ಸಮಯ.ಸ್ವಲ್ಪ ಬೇಗನೆ  ಮಾಡಿದ್ದರು  ಅಜ್ಜನ ಹಟಕ್ಕೆ .ತಾನು ಸಾಯುವುದರೊಳಗೆ ಮೊಮ್ಮಗನ ಉಪನಯನ ನೋಡುವಾಸೆ ಅವರಿಗೆ  ಅಥವಾ  ಕೊನೆಗೆ ಅಪ್ಪನೊಬ್ಬನಿಗೆ ಮಾಡಲು ಕಷ್ಟವಾಗುತ್ತದೆ ಎನ್ನೋದು ತಲೆಯಲ್ಲಿ ಇದ್ದಿರಬಹುದು.
              ಅಂತೂ ಉಪನಯನ ನಿಶ್ಚಯವಾಗಿ ಎಲ್ಲರನ್ನು ಕರೆಯೋದು ಶುರುವಾಗಿತ್ತು..ಅವಾಗ ಸ್ಕೂಟರ್ ಇತ್ತು  ನಮ್ಮಮನೆಯಲ್ಲಿ .ಒಂದು ದಿನ ಕರೆಯಲು ಹರಿಗೆ ಗೋ ಹಲಗೇರಿ ಗೋ ಹೋಗಿದ್ದಾರೆ ಅಪ್ಪ ಅಮ್ಮ ..ಅಲ್ಲಿಯ ರಸ್ತೆ ಗಳೇ ಹಾಗೆ ಕಲ್ಲು ಮಣ್ಣಿನ ರಸ್ತೆ .ರಾತ್ರಿ 8 ಆದ ನಂತರ ಒಬ್ಬರು ರಸ್ತೆಯಮೇಲೆ ಕಾಣೋದಿಲ್ಲ .ಅಕ್ಕ ಪಕ್ಕದಲ್ಲಿ ಕಾಡುಗಳು ಮದ್ಯ ಹೆಬ್ಬಾವು ಹೊಟ್ಟೆ ತುಂಬಾ ತಿಂದು ಮಲಗಿದಂತೆ ಕಾಣುವ ರಸ್ತೆ .ಈ ಸಮಯದಲ್ಲಿ   ಅಜ್ಜನ ಮನೆಯಲ್ಲಿ ಕರೆದು 8 ರ ಸಮಯದಲ್ಲಿ ಹೊರಟಿದ್ದಾರೆ. ನಮ್ಮ ಸ್ಕೂಟರಿನ ಲೈಟ್ ಕೈ ಕೊಟ್ಟು ಬಿಡ್ತು ಅಷ್ಟೊತ್ತಿಗೆ.ಮನೆಗೆ ಹೇಳಲು ಮೊಬೈಲ್ ಇರಲಿಲ್ಲ  .ಕೊನೆಗೆ ಹೇಗೋ ಅಪ್ಪನ ಸಿಲುಕಿನಲ್ಲಿ ಇರುವ ಸಲಕರಣೆಯಿಂದ  ಸ್ವಲ್ಪ ಸರಿ ಮಾಡಿಕೊಂಡು ಹೇಗೋ  ಮನೆ ಮುಟ್ಟಿದರು.
              ಮರುದಿನ ಅಪ್ಪನೊಂದಿಗೆ ನಾನು ಹೊರಟಿದ್ದೆ .ಅಪ್ಪನ ಕಡೆ ನೆಂಟರ ಮನೆಯಾಗಿತ್ತು ಅದು.ಅಮ್ಮ ಎಲ್ಲಿಗೋ ಹೋಗಿದ್ದರು ಅನಿಸುತ್ತೆ .ಅಪ್ಪ ಮಗಳು ಇಬ್ಬರೇ ಇದ್ದರು.ನಮ್ಮಕಡೆಯ ಪದ್ದತಿಯೇ ಹಾಗೇ  ಬಂದವರಿಗೆ ಕುಡಿಯಲು ಏನಾದರು ಕೋಡಲೇಬೇಕು ಕೊನೆಗೆ ಸಕ್ಕರೆನಾದರು.ಅದಾಗಲೇ 4 ಮನೆಯಲ್ಲಿ ಕುಡಿದು ಸಾಕಾಗಿತ್ತು .ನಾವು ಏನು ಬೇಡ ಎಂದರೂ ಕೇಳದೇ ಮಗಳೇ ಸ್ವಲ್ಪಾ ಹಾಲು ಬೆರೆಸು ಎಂದಾಗಿತ್ತು ಆ ಪುಣ್ಯಾತ್ಮ .ಅವಳು 2 ಲೋಟದಲ್ಲಿ ಅರ್ಧ ತಂದಿಟ್ಟಳು .ಹಾಳಾದ್ದು ನನ್ನ ಲೋಟದಲ್ಲೇ ಇರಬೇಕೆ ಆ ಇರುವೆ.ಮನೆಯಲ್ಲಿ ಒಂದು ಚಿಕ್ಕದೇನಾದರೂ ಇದ್ದರು ಗಲಾಟೆ ಮಾಡೋಳಿಗೆ ಇವತ್ತು ಕಣ್ಣು ಮುಚಿಕೊಂಡು ಕುಡಿದಿದ್ದಾಯಿತು ಆ ಇರುವೆಯನ್ನು ಕಷ್ಟಪಟ್ಟು ಲೋಟದ ಅಡಿಯಲ್ಲೇ ಬಿಟ್ಟು .
               ಮೊದಲೆಲ್ಲಾ ಕಾರ್ಯಕ್ರಮ  ಇದೆ ಎಂದರೆ 4 ದಿನ ಮೊದಲೇ ನೆಂಟರು ಬಂದು ಸೇರುತ್ತಿದ್ದರು.ಭತ್ತ ಕುಟ್ಟೋದರಿಂದ ಹಿಡಿದು ಊಟ ಆದ  ಮೇಲೆ ಬಾಳೆಲೆ ತೆಗೆದು  ನೆಲ ಸಾರಿಸುವುದರ ವರೆಗೂ ಊರ ಜನ ಮತ್ತೆ ನೆಂಟರೇ ಮಾಡುತ್ತಿದ್ದರು. ಹೀಗೆ 4 ದಿನ ಮೊದಲು ಬಂದವರಲ್ಲಿ ಅಜ್ಜನ ತಮ್ಮನ ಮೊಮ್ಮಗಳು ಗೀಜಗಾರಿನಿಂದ ಬಂದಿದ್ದಳು ಅವಳಮ್ಮನ ಜೊತೆ..ಸುಮಾರು ನನಗಿಂತ 1 ವರ್ಷ ದೊಡ್ಡವಳಾಗಿದ್ದರಿಂದ ಆಟ ಆಡಲು ಚನ್ನಾಗಾಗಿತ್ತು.ಉಪನಯನ ಮುಗಿದು ಮರುದಿನ ಆಗಿದೆ ಮದ್ಯಾಹ್ನದ ಸಮಯ ಆ ಹುಡುಗಿ ಕಾಣಿಸುತ್ತಿಲ್ಲ .ಎಲ್ಲ ನನ್ನೊಂದಿಗೆ ಇದಾಳೆ ಅಂದುಕೊಂಡಿದ್ರು.ಅವಳು ನನ್ನ ಜೊತೆಯೂ ಇಲ್ಲ .ಎಲ್ಲರಿಗೂ ಭಯ ಶುರುವಾಗಿದ್ದು ಅವಾಗಾ.ನಮ್ಮ ಉರಿನಲ್ಲಿ ಕೆರೆ ಬೇರೆ ಇದೆ ಆಟ ಆಡಲು ಹೋಗಿ ಅಲ್ಲೆಲ್ಲಾದರೂ ಬಿದ್ಲ  ಅನ್ನೋದೇ ಎಲ್ಲರ ತಲೆಯಲ್ಲೂ .ಇಡೀ ಊರನ್ನು 10 ಸಲ ಸುತ್ತಿದ್ದಾಯ್ತು .ಎಲ್ಲೂ ಪತ್ತೆ ಇಲ್ಲ ಆಸಾಮಿ.ಮನೆಯ ಎದುರಿಗೆ ತೋಟ. ಮೆಟ್ಟಿಲ ಪಕ್ಕದಲ್ಲೇ ಬಾವಿಬೇರೆ. ಅದನ್ನು ಇಣುಕಿ ನೋಡಿದ್ದಾಯ್ತು .ಅವಳ  ಅಮ್ಮನ ರೋದನೆಯನ್ನು ನೋಡಲಾಗುತ್ತಿರಲಿಲ್ಲ ಪಾಪ. ಕೆಲವರು ಹೇಳಿದ್ರು ಇದು ಚೌಡಿದೇ ಕಾಟ ಅಂತ .ಅದಕ್ಕೆ ಸಿಟ್ಟು ಬಂದರೆ ಎಲ್ಲಾದರು ಅಡಗಿಸಿ ಇಟ್ಟು ಬಿಡುತ್ತಂತೆ.ನನ್ನ ಅಜ್ಜನ ತಂಗಿಯನ್ನು ಹೀಗೆ ಒಂದುಸಲ ಮೇಲ್ಮೆತ್ತಿ ಯ ಮೇಲೆ ಅಡಗಿಸಿ ಬಿಟ್ಟಿತ್ತು ಎಷ್ಟು ಹುಡುಕಿದರೂ ಸಿಗದೇ ಕೊನೆಗೆ ಮೇಲ್ಮೆತ್ತಿ ನೋಡಿದಾಗ ಮೂಲೆಯಲ್ಲಿ ಸುಮ್ಮನೆ ಕೂತಿದ್ರು ಅಂತ ಅಜ್ಜ ಹೇಳಿದ ನೆನಪು .ಮನೆಯನ್ನೂ ಹುಡುಕಿದ್ದಾಯ್ತು. ಇಷ್ಟಾದರೂ ಜಗುಲಿಯಲ್ಲಿ ಅಜ್ಜಂದಿರು ತಮ್ಮ ಪಾಡಿಗೆ ಹರಟೆ ಹೊಡೆಯುತ್ತಾ ಕೂತಿದಾರೆ.ಅವರಿಗೆ ಇಷ್ಟೆಲ್ಲಾ  ಆಗಿದ್ದರ ಅರಿವೇ ಇಲ್ಲ .ಕೊನೆಗೆ ಅಜ್ಜನಲ್ಲಿ ಹೋಗಿ ಕೇಳಿದೆ .ಅವರಿಗೆ ಕಿವಿ ಕೇಳುತ್ತಿರಲಿಲ್ಲ .ಸ್ವಲ್ಪ ಜೋರಾಗಿ ಅಜ್ಜಾ ಸುಮ ಕಾಣ್ತಿಲ್ಲೆ ನಿಂಗೆಂತಾರು ಗೊತ್ತಿದ್ದನ ಅಂತ ಕೇಳಿದ್ರೆ ಅಜ್ಜ ಹೇಳಿದ್ದು ನನ್ನ ಕ್ವಾಣೆಲಿ ಮಲಗಿದ್ದ .ಅಜಾ ನಿದ್ದೆ ಬತ್ತಿದ್ದು  ಒಳಗೆಲ್ಲೂ ಜಾಗಿಲ್ಲೇ ಹೇಳಿ ಬಂದ  ನಾನೇ  ನನ್ ಕ್ವಾಣೆಲಿ ಮಲ್ಸಿಕ್ಕ್ ಬೈಂದಿ .ಇವಾಗಷ್ಟೇ ಹೋಗಿ ನೋಡಿರೆ ಚಳಿ ಲಿ ನಡುಗ್ತಿತ್ತು ಒಂದು ಬೆಡ್ ಶೀಟ್ ನು ಹೊದ್ಸಿಕ್ ಬೈಂದಿ ಅಂದ್ರು .ಜಗುಲಿಯಲ್ಲೇ ಅಜ್ಜನ ಕೋಣೆ ಇದ್ದಿದ್ರಿಂದ ಆ ಕೋಣೆಯನ್ನು ಹುಡುಕಿರಲಿಲ್ಲ . ಅವಳ ಅಮ್ಮ ತಕ್ಷಣ ಓಡಿ ಹೋಗಿ ಮಗಳನ್ನ ಮುದ್ದಿಸಿ ಅಳ್ತಿದ್ರೆ ಆ ಹುಡುಗಿಗೆ ಏನಾಗ್ತಿದೆ ಅಂತಾನೆ ತಿಳಿಯುತ್ತಿಲ್ಲ. ನಿದ್ದೆ  ಬೇರೆ .ಕೊನೆಗೆ ನಡೆದಿದ್ದೆಲ್ಲ ಹೇಳಿದ್ಮೇಲೆ ಬಿದ್ದು ಬಿದ್ದು ನಗೋಕೆ ಶುರು ಆ ಹುಡುಗಿ.