Thursday, March 22, 2012

ಮಂಗ..

ಮೈಸೂರ್ ಗೆ ಬಂದ ಹೊಸತು. ಮಂಗಗಳೆಂದರೆ ನಮ್ಮ ಉರಿನಲ್ಲಿ ಹಿಡಿ ಹಿಡಿ ಅಂದ ತಕ್ಷಣ ಓಡಿಹೋಗೋದನ್ನ ನೋಡಿದ್ದೆ . ಅದರ ಕಿತಾಪತಿ ತಾಳಲಾರದೆ ಹಿಡಿಸಿ ದೂರದ ಕಾಡಿಗೆ ಬಿಟ್ಟು ಬರ್ತಿದ್ರು.ಆದರು  ಒಂದ್ ೧೫ ದಿನಕ್ಕೆಲ್ಲ ಮತ್ತೆ ಅಷ್ಟೇ ಮಂಗಗಳು ಹಾಜರಿ ಹಾಕ್ತಿದ್ವು.ಕೆಲವೊಂದು ಸಲ ಸಿಗದೇ ಮರದ ಮೂಲೆಯಲ್ಲಿ ಅಡಗಿ ಕುಳಿತಿದ್ರೆ ಬಂದೂಕಿನಿಂದ ಹೊಡಿತಿದ್ರು.ಆಗ ಅದು ಕೈ ಮುಗಿದುಕೊಂಡು ಕೆಳಕ್ಕೆ ಬೀಳೋದನ್ನ ನೋಡಿದ್ರೆ ಪಾಪ ಅನಿಸೋದು.(ಯಾಕೆ ಸಾಯೋವಾಗ ಕೈ ಮುಗಿಯುತ್ತೆ ಅನ್ನೋದು ಇನ್ನು ಗೊತ್ತಿಲ್ಲ).. 
ಈ ಮೈಸೂರ್ ನಲ್ಲಿ ಬಂದ  ೪ ದಿನಕ್ಕೆ ಮಂಗದ ಪರಿಚಯವಾಗಿತ್ತು . ಕೆಳಗಡೆ ಅಕ್ಕನ ಮನೆಗೆ ದಿನಾ ಹೋಗ್ತಿದ್ದೆ..ಹಾಗೆ ಅವತ್ತು ಹೋದಾಗ ಅಕ್ಕ ಅಡುಗೆ ಮನೆಯಲ್ಲಿ ಯರತ್ರಾನೋ ಚಿಕ್ಕ ಮಕ್ಕಳನ್ನು ಮಾತನಾಡಿಸುವ ಹಾಗೆ ಮಾತನಾಡ್ತಿದ್ರು.. ಸುಮ್ಮನೆ ಹೊರಗಡೆ ಕುಳಿತಿದ್ದೆ. ಅವರ ಗಂಡ ಬಂದೋರೆ ಅಕ್ಕ ಯಾರತ್ರ ಮಾತಾಡ್ತಿದಾಳೆ ಕೇಳಿದ್ರು .ಏನೋ ಗೊತ್ತಿಲ್ಲ ಎದರು ಮನೆ ಆಂಟಿ ಹತ್ರ ಇರ್ಬೋದು ಅಂದೆ.ಒಳಗ್ ಹೋಗಿ ನೋಡ್ಕೋ ಬಾ ಅಂದ್ರು . ಹೋಗ್ ನೋಡ್ತೀನಿ ಒಂದು ಕೈಲಿ ತೊಗರಿ  ಬೇಳೆ ಹಿಡ್ಕೊಂಡಿದಾರೆ .ಎದುರು ಗಡೆ ಕಿಟಕಿ ಇಂದ ಮಂಗ ಇವರ ಕೈ ಹಿಡ್ಕೊಂಡು ಆ ತೊಗರಿ ಬೀಳೆ ತಿಂತಾ ಇತ್ತು .. ಯಪ್ಪೋ !!


ಅಲ್ಲಿಂದ ಸೀದಾ ಮನೆಗೆ ಓಡಿ ಬಂದೆ. ಮುಷ್ಟಿ ತುಂಬಾ ಹೆಸರು ಬೇಳೆ ತಗೊಂಡು  ಕಿಟಕಿ ಹತ್ರ ನಿತ್ಕೊಂಡು ಕಾಯ್ತಿದ್ದೆ .ಬರ್ಲಿಲ್ಲ .ಮರ್ದಿನ ಕಿಟಕಿ ಕೆಳಗಡೆ ಎಲ್ಲ ಸ್ವಲ್ಪ ಹರಡಿ ಕಿಟಕಿ ಇಂದ ನೋಡ್ತಾ ಇದ್ದೆ ಒಂದು ಮರಿ ಮಂಗ ಬಂತು .ಕೈ ಚಾಚಿದೆ . ನಾನು ಕೈ ತೆಗೆದು ಕೊಳ್ಳಬಾರದೆಂದು ಚಂದ ಮಾಡಿ ನನ್ನ ಕೈ ಅನ್ನು ಒಂದು ಕೈಲಿ ಹಿಡ್ಕೊಂಡು ಮತ್ತೊಂದು ಕೈ ಲಿ ಆ ಬೇಳೆ ತೆಗೆದು ಕೊಂಡು ತಿನ್ನೋಕೆ ಸ್ಟಾರ್ಟ್ ಮಾಡ್ತು . ಹೀಗೆ ಅಬ್ಯಾಸ ವಾಗಿ ಬಿಟ್ಟಿತ್ತು ದಿನಾ ೧೧ ಗಂಟೆಗೆ ಬಂದ್ಬಿಡೋದು ಕಿಟಕಿ ಹತ್ರ.ಬಟ್ಟೆ ನೆತಾಕೋ ಹಗ್ಗದ ಮೇಲೆ ಸುಮಾರು ಸರ್ಕಸ್ ಮಾಡಿ ನಗಿಸ್ತಿತ್ತು .ಒಂದು ದಿನ ಇಸ್ಟೊಂದು ಕ್ಲೋಸ್ ಆಗಿದೆ ಹತ್ತಿರ ಹೋಗಿ ಮುಟ್ಟೋಣ ಅಂತ ಹೋದರೆ ಅದರ ಅಮ್ಮ ಬಂದು ಹೆದರಿಸಿ ಕೈಯಲ್ಲಿದ್ದ  ಬೇಳೆ ಯನ್ನೆಲ್ಲ ಅಲ್ಲೇ ಬಿಟ್ಟು ಓಡುವ ಹಾಗೆ ಮಾಡಿತ್ತು.
 ಕೈಯಲ್ಲಿ ಕೋಲು ಇಲ್ಲದಿದ್ದರೆ ಹೊರಗಡೆ ಹೋಗೋಕೆ ಆಗೋಲ್ಲ ಅಷ್ಟು ಹೆದರಿಸುತ್ತೆ ಸಿಟಿ ಮಂಗಗಳು.ಪಾಪ ಅವಾದ್ರು ಏನ್ ಮಾಡತ್ತೆ ತಿನ್ನೋಕೆ ಹಣ್ಣಿನ ಮರಗಳಿಲ್ಲ ,ವಾಸಿಸೋಕೆ ಕಾಡುಗಳಿಲ್ಲ.ಈ ಸಿಟಿ ನಲ್ಲಿ ಏನು ಸಿಗಲ್ಲ ಹಾಗಾಗಿ ಹೆದರಿಸುವ ತಂತ್ರ ಮಾಡಿರ್ಬೋದು. ಮನೆಯ ಬಾಗಿಲು ತೆಗೆದು ಒಳಗಡೆ ಏನಾದ್ರೂ ಮಾಡ್ತಿದ್ರೆ ಒಳ್ಳೆ ನೆಂಟರು ಬಂದ ಹಾಗೆ ಬಂದು ಅಲ್ಲಿದ್ದ ಪಪ್ಪಾಯ, ಬಾಳೆ ಹಣ್ಣು ಅಷ್ಟು ಕಾಲಿ ಆಗೋವರೆಗೆ ತನ್ನದೇ ಮನೆ ಅನ್ನೋ ತರಾ ಕುಳಿತು ತಿಂದು ಹೋಗುತ್ತೆ .ಅಲ್ಲಿಯ ವರೆಗೆ ನಾವು ಹೊರ ಬರಲು ಹೆದರಬೇಕು...

ಯಾಕೋ ಗೊತ್ತಿಲ್ಲ ಆ ಮರಿ ಮಂಗ ತುಂಬಾನೇ ಇಷ್ಟ ಆಗಿತ್ತು. ದಿನಾ ಅದರ ಹೊಟ್ಟೆ ಸೇವೆ ನಡಿತಿತ್ತು .ಅದು ಬಿಟ್ಟಿ ಮನರಂಜನೆ ಕೊಟ್ಟು ಹೋಗ್ತಿತ್ತು.. ಅದನ್ನ ಹಿಡಿದು ಮನೆಯಲ್ಲೇ ಸಾಕೋಣ ಅಂದ್ಕೊಂಡೆ..ಮರುದಿನ ಒಂದು ಗೋಣಿಚೀಲ ಮತ್ತೆ ಹಗ್ಗ  ರೆಡಿ ಮಾಡ್ಕೊಂಡು ಇಟ್ಕೊಂಡಿದ್ದೆ .ಹಿಡಿಯೋ ತಾಕತ್ತು ನನಗಿಲ್ಲ ಅನ್ನೋದು ತಿಳಿದಿತ್ತು ಅದ್ರು ಟ್ರೈ ಮಾಡೋಕೆನಂತೆ.ಅವತ್ತು ೧೧ ಗಂಟೆಗೆ ರೆಡಿ ಆಗಿ ನೋಡ್ತಿದ್ದೆ ಬಂದೆ ಇಲ್ಲ ಅಸ್ಸಾಮಿ.ಹೀಗೆ ೩,೪ ದಿನ ಅಯ್ತು ಆದರು ನಾಪತ್ತೆ ..ದೀಪಾವಳಿ ಟೈಮ್ ಬೇರೆ. ಸ್ವಲ್ಪ ದಿನ ಆದ್ಮೇಲೆ ಪಕ್ಕದಲ್ಲಿದ್ದ ತೆಂಗಿನ ಮರದ ಮೇಲೆ ಒಂದು ಮಂಗ ಸುಮ್ಮನೆ ಕೂತಿದೆ.ಮುಖ ಮೂತಿ ಬಾಲ ಎಲ್ಲ ಸುಟ್ಟು ಹೋಗಿತ್ತು ಅದು ಹೇಗೆ ಜೀವ ಹಿಡ್ಕೊಂಡ್ ಬಂದು ಇಲ್ಲಿ ಕುತಿತ್ತೋ ಏನೋ  ..ಪಾಪ ಅಂತ ಹತ್ತಿರ ಹೋಗಿ ನೋಡಿದ್ರೆ ಇದೆ ಕಿಲಾಡಿ ಮಂಗ . ಫುಲ್ ಸ್ಮೆಲ್ ಬೇರೆ ಬರ್ತಿತ್ತು.ಅಲ್ಲೇ ನೆಲದ ಮೇಲೆ  ಬೇಳೆ ಹಾಕಿ ಬಂದೆ. ಸ್ವಲ್ಪ ಹೊತ್ತು ಬಿಟ್ಟು ಹೋಗಿ ನೋಡಿದ್ರೆ ಆ ಕಾಳು ಅಲ್ಲೇ ಇತ್ತು ಆ ಮರಿ ಮಂಗನು ಕೊನೆಗೆ ಬರಲೇ ಇಲ್ಲ .