Saturday, July 21, 2012

ನಗೋಕೆ ಶುರು ಕಳೆದುಹೋದ ಹುಡುಗಿ!!!

            ತಮ್ಮನ ಉಪನಯನದ ಸಮಯ.ಸ್ವಲ್ಪ ಬೇಗನೆ  ಮಾಡಿದ್ದರು  ಅಜ್ಜನ ಹಟಕ್ಕೆ .ತಾನು ಸಾಯುವುದರೊಳಗೆ ಮೊಮ್ಮಗನ ಉಪನಯನ ನೋಡುವಾಸೆ ಅವರಿಗೆ  ಅಥವಾ  ಕೊನೆಗೆ ಅಪ್ಪನೊಬ್ಬನಿಗೆ ಮಾಡಲು ಕಷ್ಟವಾಗುತ್ತದೆ ಎನ್ನೋದು ತಲೆಯಲ್ಲಿ ಇದ್ದಿರಬಹುದು.
              ಅಂತೂ ಉಪನಯನ ನಿಶ್ಚಯವಾಗಿ ಎಲ್ಲರನ್ನು ಕರೆಯೋದು ಶುರುವಾಗಿತ್ತು..ಅವಾಗ ಸ್ಕೂಟರ್ ಇತ್ತು  ನಮ್ಮಮನೆಯಲ್ಲಿ .ಒಂದು ದಿನ ಕರೆಯಲು ಹರಿಗೆ ಗೋ ಹಲಗೇರಿ ಗೋ ಹೋಗಿದ್ದಾರೆ ಅಪ್ಪ ಅಮ್ಮ ..ಅಲ್ಲಿಯ ರಸ್ತೆ ಗಳೇ ಹಾಗೆ ಕಲ್ಲು ಮಣ್ಣಿನ ರಸ್ತೆ .ರಾತ್ರಿ 8 ಆದ ನಂತರ ಒಬ್ಬರು ರಸ್ತೆಯಮೇಲೆ ಕಾಣೋದಿಲ್ಲ .ಅಕ್ಕ ಪಕ್ಕದಲ್ಲಿ ಕಾಡುಗಳು ಮದ್ಯ ಹೆಬ್ಬಾವು ಹೊಟ್ಟೆ ತುಂಬಾ ತಿಂದು ಮಲಗಿದಂತೆ ಕಾಣುವ ರಸ್ತೆ .ಈ ಸಮಯದಲ್ಲಿ   ಅಜ್ಜನ ಮನೆಯಲ್ಲಿ ಕರೆದು 8 ರ ಸಮಯದಲ್ಲಿ ಹೊರಟಿದ್ದಾರೆ. ನಮ್ಮ ಸ್ಕೂಟರಿನ ಲೈಟ್ ಕೈ ಕೊಟ್ಟು ಬಿಡ್ತು ಅಷ್ಟೊತ್ತಿಗೆ.ಮನೆಗೆ ಹೇಳಲು ಮೊಬೈಲ್ ಇರಲಿಲ್ಲ  .ಕೊನೆಗೆ ಹೇಗೋ ಅಪ್ಪನ ಸಿಲುಕಿನಲ್ಲಿ ಇರುವ ಸಲಕರಣೆಯಿಂದ  ಸ್ವಲ್ಪ ಸರಿ ಮಾಡಿಕೊಂಡು ಹೇಗೋ  ಮನೆ ಮುಟ್ಟಿದರು.
              ಮರುದಿನ ಅಪ್ಪನೊಂದಿಗೆ ನಾನು ಹೊರಟಿದ್ದೆ .ಅಪ್ಪನ ಕಡೆ ನೆಂಟರ ಮನೆಯಾಗಿತ್ತು ಅದು.ಅಮ್ಮ ಎಲ್ಲಿಗೋ ಹೋಗಿದ್ದರು ಅನಿಸುತ್ತೆ .ಅಪ್ಪ ಮಗಳು ಇಬ್ಬರೇ ಇದ್ದರು.ನಮ್ಮಕಡೆಯ ಪದ್ದತಿಯೇ ಹಾಗೇ  ಬಂದವರಿಗೆ ಕುಡಿಯಲು ಏನಾದರು ಕೋಡಲೇಬೇಕು ಕೊನೆಗೆ ಸಕ್ಕರೆನಾದರು.ಅದಾಗಲೇ 4 ಮನೆಯಲ್ಲಿ ಕುಡಿದು ಸಾಕಾಗಿತ್ತು .ನಾವು ಏನು ಬೇಡ ಎಂದರೂ ಕೇಳದೇ ಮಗಳೇ ಸ್ವಲ್ಪಾ ಹಾಲು ಬೆರೆಸು ಎಂದಾಗಿತ್ತು ಆ ಪುಣ್ಯಾತ್ಮ .ಅವಳು 2 ಲೋಟದಲ್ಲಿ ಅರ್ಧ ತಂದಿಟ್ಟಳು .ಹಾಳಾದ್ದು ನನ್ನ ಲೋಟದಲ್ಲೇ ಇರಬೇಕೆ ಆ ಇರುವೆ.ಮನೆಯಲ್ಲಿ ಒಂದು ಚಿಕ್ಕದೇನಾದರೂ ಇದ್ದರು ಗಲಾಟೆ ಮಾಡೋಳಿಗೆ ಇವತ್ತು ಕಣ್ಣು ಮುಚಿಕೊಂಡು ಕುಡಿದಿದ್ದಾಯಿತು ಆ ಇರುವೆಯನ್ನು ಕಷ್ಟಪಟ್ಟು ಲೋಟದ ಅಡಿಯಲ್ಲೇ ಬಿಟ್ಟು .
               ಮೊದಲೆಲ್ಲಾ ಕಾರ್ಯಕ್ರಮ  ಇದೆ ಎಂದರೆ 4 ದಿನ ಮೊದಲೇ ನೆಂಟರು ಬಂದು ಸೇರುತ್ತಿದ್ದರು.ಭತ್ತ ಕುಟ್ಟೋದರಿಂದ ಹಿಡಿದು ಊಟ ಆದ  ಮೇಲೆ ಬಾಳೆಲೆ ತೆಗೆದು  ನೆಲ ಸಾರಿಸುವುದರ ವರೆಗೂ ಊರ ಜನ ಮತ್ತೆ ನೆಂಟರೇ ಮಾಡುತ್ತಿದ್ದರು. ಹೀಗೆ 4 ದಿನ ಮೊದಲು ಬಂದವರಲ್ಲಿ ಅಜ್ಜನ ತಮ್ಮನ ಮೊಮ್ಮಗಳು ಗೀಜಗಾರಿನಿಂದ ಬಂದಿದ್ದಳು ಅವಳಮ್ಮನ ಜೊತೆ..ಸುಮಾರು ನನಗಿಂತ 1 ವರ್ಷ ದೊಡ್ಡವಳಾಗಿದ್ದರಿಂದ ಆಟ ಆಡಲು ಚನ್ನಾಗಾಗಿತ್ತು.ಉಪನಯನ ಮುಗಿದು ಮರುದಿನ ಆಗಿದೆ ಮದ್ಯಾಹ್ನದ ಸಮಯ ಆ ಹುಡುಗಿ ಕಾಣಿಸುತ್ತಿಲ್ಲ .ಎಲ್ಲ ನನ್ನೊಂದಿಗೆ ಇದಾಳೆ ಅಂದುಕೊಂಡಿದ್ರು.ಅವಳು ನನ್ನ ಜೊತೆಯೂ ಇಲ್ಲ .ಎಲ್ಲರಿಗೂ ಭಯ ಶುರುವಾಗಿದ್ದು ಅವಾಗಾ.ನಮ್ಮ ಉರಿನಲ್ಲಿ ಕೆರೆ ಬೇರೆ ಇದೆ ಆಟ ಆಡಲು ಹೋಗಿ ಅಲ್ಲೆಲ್ಲಾದರೂ ಬಿದ್ಲ  ಅನ್ನೋದೇ ಎಲ್ಲರ ತಲೆಯಲ್ಲೂ .ಇಡೀ ಊರನ್ನು 10 ಸಲ ಸುತ್ತಿದ್ದಾಯ್ತು .ಎಲ್ಲೂ ಪತ್ತೆ ಇಲ್ಲ ಆಸಾಮಿ.ಮನೆಯ ಎದುರಿಗೆ ತೋಟ. ಮೆಟ್ಟಿಲ ಪಕ್ಕದಲ್ಲೇ ಬಾವಿಬೇರೆ. ಅದನ್ನು ಇಣುಕಿ ನೋಡಿದ್ದಾಯ್ತು .ಅವಳ  ಅಮ್ಮನ ರೋದನೆಯನ್ನು ನೋಡಲಾಗುತ್ತಿರಲಿಲ್ಲ ಪಾಪ. ಕೆಲವರು ಹೇಳಿದ್ರು ಇದು ಚೌಡಿದೇ ಕಾಟ ಅಂತ .ಅದಕ್ಕೆ ಸಿಟ್ಟು ಬಂದರೆ ಎಲ್ಲಾದರು ಅಡಗಿಸಿ ಇಟ್ಟು ಬಿಡುತ್ತಂತೆ.ನನ್ನ ಅಜ್ಜನ ತಂಗಿಯನ್ನು ಹೀಗೆ ಒಂದುಸಲ ಮೇಲ್ಮೆತ್ತಿ ಯ ಮೇಲೆ ಅಡಗಿಸಿ ಬಿಟ್ಟಿತ್ತು ಎಷ್ಟು ಹುಡುಕಿದರೂ ಸಿಗದೇ ಕೊನೆಗೆ ಮೇಲ್ಮೆತ್ತಿ ನೋಡಿದಾಗ ಮೂಲೆಯಲ್ಲಿ ಸುಮ್ಮನೆ ಕೂತಿದ್ರು ಅಂತ ಅಜ್ಜ ಹೇಳಿದ ನೆನಪು .ಮನೆಯನ್ನೂ ಹುಡುಕಿದ್ದಾಯ್ತು. ಇಷ್ಟಾದರೂ ಜಗುಲಿಯಲ್ಲಿ ಅಜ್ಜಂದಿರು ತಮ್ಮ ಪಾಡಿಗೆ ಹರಟೆ ಹೊಡೆಯುತ್ತಾ ಕೂತಿದಾರೆ.ಅವರಿಗೆ ಇಷ್ಟೆಲ್ಲಾ  ಆಗಿದ್ದರ ಅರಿವೇ ಇಲ್ಲ .ಕೊನೆಗೆ ಅಜ್ಜನಲ್ಲಿ ಹೋಗಿ ಕೇಳಿದೆ .ಅವರಿಗೆ ಕಿವಿ ಕೇಳುತ್ತಿರಲಿಲ್ಲ .ಸ್ವಲ್ಪ ಜೋರಾಗಿ ಅಜ್ಜಾ ಸುಮ ಕಾಣ್ತಿಲ್ಲೆ ನಿಂಗೆಂತಾರು ಗೊತ್ತಿದ್ದನ ಅಂತ ಕೇಳಿದ್ರೆ ಅಜ್ಜ ಹೇಳಿದ್ದು ನನ್ನ ಕ್ವಾಣೆಲಿ ಮಲಗಿದ್ದ .ಅಜಾ ನಿದ್ದೆ ಬತ್ತಿದ್ದು  ಒಳಗೆಲ್ಲೂ ಜಾಗಿಲ್ಲೇ ಹೇಳಿ ಬಂದ  ನಾನೇ  ನನ್ ಕ್ವಾಣೆಲಿ ಮಲ್ಸಿಕ್ಕ್ ಬೈಂದಿ .ಇವಾಗಷ್ಟೇ ಹೋಗಿ ನೋಡಿರೆ ಚಳಿ ಲಿ ನಡುಗ್ತಿತ್ತು ಒಂದು ಬೆಡ್ ಶೀಟ್ ನು ಹೊದ್ಸಿಕ್ ಬೈಂದಿ ಅಂದ್ರು .ಜಗುಲಿಯಲ್ಲೇ ಅಜ್ಜನ ಕೋಣೆ ಇದ್ದಿದ್ರಿಂದ ಆ ಕೋಣೆಯನ್ನು ಹುಡುಕಿರಲಿಲ್ಲ . ಅವಳ ಅಮ್ಮ ತಕ್ಷಣ ಓಡಿ ಹೋಗಿ ಮಗಳನ್ನ ಮುದ್ದಿಸಿ ಅಳ್ತಿದ್ರೆ ಆ ಹುಡುಗಿಗೆ ಏನಾಗ್ತಿದೆ ಅಂತಾನೆ ತಿಳಿಯುತ್ತಿಲ್ಲ. ನಿದ್ದೆ  ಬೇರೆ .ಕೊನೆಗೆ ನಡೆದಿದ್ದೆಲ್ಲ ಹೇಳಿದ್ಮೇಲೆ ಬಿದ್ದು ಬಿದ್ದು ನಗೋಕೆ ಶುರು ಆ ಹುಡುಗಿ.