Sunday, November 4, 2012

ತಲೆನೋವು ಬಹಿಷ್ಕಾರ ಹಾಕಿದ ಹಾಗೆ ಎಲ್ಲೋ ಹೋಗಿಬಿಟ್ಟಿದೆ

     ಒಂದು ಕಾಯಿಲೆ ಬಂದರೆ ಇದೊಂದು ಬಿಟ್ಟು ಬೇರೆ ಯಾವ ಕಾಯಿಲೆ ಬಂದರು ತಡೆದು ಕೊಳ್ಳ ಬಹುದಿತ್ತು ಎನಿಸುತ್ತದೆ. ಮನುಷ್ಯನ ಮನಸ್ಥಿತಿಯೇ ಅಂತದ್ದು. ಬೇಸಿಗೆ ಕಾಲ ಬಂದರೆ ಮಳೆಗಾಲ, ಮಳೆಗಾಲ ಬಂದರೆ ಚಳಿಗಾಲ ಆಗಿದ್ದರೆ ಚನ್ನಾಗಿರುತ್ತಿತ್ತು  ಅಂದುಕೊಂಡ ಹಾಗೆ. ಇಲ್ಲಿ ನನಗೆ ಕಾಡುತ್ತಿದ್ದುದು ಸುಮಾರು ವರ್ಷದಿಂದ ತಲೆನೋವು. ಇದು ತಲೆ ಮೇಲೆ ನೋವು ಅಥವಾ ಹಣೆ ಮೇಲೆ ನೋವು ಬರುವಂತದ್ದಲ್ಲ. ಮೂಗಿನ ಸಂದು ಮತ್ತು  ಹಣೆ ಸಂದು ಕೂಡುವ ಜಾಗದಲ್ಲಿ. ಏನೋ ಒಂದು ತರಹ ಕಫ ಒಳಗೆ ಇದ್ದಂತೆ ಮುಟ್ಟಿದರೆ ಹುಬ್ಬಿನ ಸಂದು ದಪ್ಪ ಎನಿಸುತ್ತಿತ್ತು. ಇದಕ್ಕೊಂದು ಇತಿ ಮಿತಿ ಅನ್ನೋದಿಲ್ಲ ಬಂದರೆ ಒಂದು ವಾರ ಆದರು ಹೋಗೋದಿಲ್ಲ. ಕೆಲವೊಂದು ಮುಜುಗರ  ಮಾಡೋ ನೆಂಟರು ಮನೆಗೆ ಬಂದು ಒಂದು ವಾರ ಉಳಿದರೆ ಹೇಗಾಗತ್ತೋ  ಹಾಗನಿಸ್ತಿತ್ತು ಈ ತಲೆ ನೋವು. ಕೆಲವೊಂದು ಸಲ ಬೆಳಗ್ಗೆ ಶುರು ವಾದ ತಲೆ ನೋವು ಸಂಜೆ ಕಮ್ಮಿ ಆಗಿ ಮರುದಿನ ಬೆಳಗ್ಗೆ ಮತ್ತೆ ಅದೇ ಸಮಯಕ್ಕೆ ಶುರುವಾಗೋ ತರದ್ದು . ಇದೊಳ್ಳೆ ಕಾಲೇಜ್ ಗೆ ಹೋಗಲೇಬೇಕು ಅಂತ ಕಟ್ಟುಪಾಡು ಹಾಕಿದಾರೆ ಅಂತ ಹೋಗ್ತಿವಲ್ಲ ಆತರ ಯಾರೋ ಕಟ್ಟುಪಾಡು ಹಾಕಿದಾರೆ ಅನ್ನೋ ಹಾಗೆ ಅದೇ ಸಮಯಕ್ಕೆ ಬರೋದು. ಕೆಲವೊಂದು ಸಲ ತಡೆಯಲಾಗದೆ ಕ್ಲಾಸ್ ನಲ್ಲಿ ಮಲಗಿ ಸರಿಯಾಗಿ ಉಟ  ಮಾಡಲ್ಲ ಏನಿಲ್ಲ ಇನ್ನೇನಾಗತ್ತೆ  ಅಂತ ಬೈಸಿಕೊಂಡಿದ್ದು ಇದೆ. ಅನುಭವಿಸೋರ ಕಷ್ಟ ಅವರಿಗೇನು ಗೊತ್ತು ಬೈಯೋದು ಬಿಟ್ಟು.

ಅತ್ತೆಗೆ ಯಾವುದೊ ಕಾರಣಕ್ಕೆ ಡಾಕ್ಟರ್ ಹತ್ತಿರ ಹೋಗೋ ಕೆಲಸ ಇತ್ತು .ಆ ಡಾಕ್ಟರ್ ನಾಡಿ ನೋಡಿನೇ ನಮಗೇನು ಕಾಯಿಲೆ ಇದೆ ಅಂತ ಗುರುತಿಸುವವರು. ಅದು ಅವರು ಬೆಂಗಳೂರಿನಿಂದ ವಾರಕ್ಕೆ ಒಂದು ಸಲ ಮೈಸೂರ್ ಗೆ ಬರೋದು. ಮೊದಲೇ ಅವರಲ್ಲಿ ಫೋನ್ ನಲ್ಲಿ ಮಾತಾಡಿ 9:30 ಕ್ಕೆ ಹೋದರೆ ಒಳಗೆ ಹೋಗಲು ಆಗೋದು 1:30 ಕ್ಕೆ.ಅಷ್ಟು ಉದ್ದದ ಕ್ಯು .ಅದು ಅವರ ಶಾಪ್ ಇದ್ದಿದ್ದು ಯಾವುದೊ ಗಲ್ಲಿಯಲ್ಲಿ. ಒಂದು ಚಿಕ್ಕ ಕೋಣೆ ಯನ್ನು ಬಾಡಿಗೆಗೆ ಪಡೆದು ಮಾಡುತ್ತಿದ್ದುದು.ಹೊರಗೆ ಕಾಯುತ್ತಿದ್ದವರು ಬಿಸಿಲಿನ ತಾಪಕ್ಕೆ ಸುಸ್ತಾಗಿ ಹೋಗಬೇಕಿತ್ತು. ಅವಳ ಜೊತೆ ಸುಮ್ಮನೆ ಹೋಗಿದ್ದೆ ನಾನು.ಕಾದು ಕಾದು ಸುಸ್ತಾಗಿ ತಲೆ ನೋವಿನ ಮಹಾಶಯನು ಅದೇ ಸಮಯಕ್ಕೆ ಬಂದುಬಿಟ್ಟ. ತಲೆ ನೋವಿಗೆ ಡಾಕ್ಟರ್ ಹತ್ತಿರ ತೋರಿಸೋಣ ಅನಿಸಿದ್ದೇ ಅವಾಗ.

1:30 ಕ್ಕೆ ಅಂತು ಇಂತೂ ಒಳಗಡೆ ಹೋಗಿ ಆಯ್ತು. ಅತ್ತೆಗೆ ಬೇಕಾದ ಮಾತ್ರೆಗಳನ್ನೆಲ್ಲ ಕೊಟ್ಟ ಮೇಲೆ ನನ್ನ ನೋಡಿ ಏನಮ್ಮ ಇಷ್ಟೊಂದ್ ದಪ್ಪ ಇದ್ದೀಯ ಅಂದ್ರು.ಅದಕ್ಕೆ ಸಣ್ಣ ಆಗಲು ಏನಾದರು ಮಾತ್ರೆ ಇದ್ದರೆ ಕೊಡುತ್ತಿರೆನೋ ಅಂತ ಬಂದೆ ಅಂದೆ. ನಕ್ಕು ನೀನು ಮುಂದಿನ ಸಲ ಬರೋದ್ರೊಳಗೆ ಈ ಬಾಗಿಲಿನ ಅರ್ಧದಷ್ಟು ಆಗಿರ್ತಿಯ ಅಂತ ಎದುರಿಗಿನ ಬಾಗಿಲು ತೋರ್ಸಿ. ಯಾವುದೋ ಚೂರ್ಣ ಕೊಟ್ರು ಒಂದು ತಿಂಗಳು ತಗೋ ಅಂತ . ಆ ಚೂರ್ಣ ನೋ ತಿಂದಷ್ಟು ತಿನ್ನಬೇಕು ಎನಿಸುವಂತದ್ದು. ಉತ್ತುತ್ತೆ, ತುಪ್ಪ, ಸಕ್ಕರೆ ಎಲ್ಲ ಹಾಕಿ ಮಾಡಿದ್ದು .ಒಂದೇ ತಿಂಗಳಲ್ಲಿ 2 ಬಾಟಲಿ ಕಾಲಿ  ಮಾಡಿದ್ದೆ.(ಆದರು ವ್ಯತ್ಯಾಸವೇನಿಲ್ಲ). ಹಾಗೆ  ನಾಡಿ ಪರೀಕ್ಷೆ ಮಾಡಿ ತಲೆನೋವು ಏನಾದ್ರು ಇದ್ಯ ಅಂದ್ರು . ಹೌದು ಎಂದೆ. ಅದಕ್ಕೆ ಕೊಟ್ಟ ಔಷಧಿ ತುಂಬಾ ಪರಿಣಾಮಕಾರಿ ಆಯ್ತು . ಎರಡು ತಿಂಗಳು ತಗೊಂಡೆ ತಲೆನೋವು ಊರೊಳಗೆ ಬರೋ ಹಾಗಿಲ್ಲ ಅಂತ ಬಹಿಷ್ಕಾರ ಹಾಕಿದ ಹಾಗೆ ಎಲ್ಲೋ ಹೋಗಿಬಿಟ್ಟಿದೆ. ನಿಮಗೂ ಈ ತರಹದ ತಲೆನೋವಿದ್ದರೆ ಮಾಡಿ ನೋಡಿ.
1.ಸಾಂಬಾರ್ ಈರುಳ್ಳಿ ಅಂತ ಸಣ್ಣದು ಸಿಗುತ್ತಲ ಅದನ್ನು ಬೆಳಗ್ಗೆ ಮತ್ತು ರಾತ್ರೆ ತಲಾ ಒಂದರಂತೆ 2 ತಿಂಗಳ ಕಾಲ ತಿನ್ನಬೇಕು.

2.  25ml ಎಣ್ಣೆ
     1 ಕಾಳು ಸಾಸಿವೆ 
     1 ಕಾಳು ಮೆಂತ್ಯೆ 
     1 ಕಾಳು ಜೀರಿಗೆ 
     1 ಕಾಳು ಕಾಳುಮೆಣಸು 
     1 ಕಾಳು ಕೊತ್ತಂಬರಿ
ಎಣ್ಣೆಗೆ ಸಾಸಿವೆ, ಮೆಂತ್ಯೆ, ಜೀರಿಗೆ, ಕೊತ್ತಂಬರಿ ಮತ್ತು ಕಾಳು ಮೆಣಸು ಹಾಕಿ ಕುದಿಸಿ ತಣಿಸಬೇಕು.ಅಷ್ಟು ತಣಿದ ನಂತರ ಮತ್ತೆ ಕುದಿಸಬೇಕು. ಹೀಗೆ 6 ಸಲ ಮಾಡಿ ಡಬ್ಬ ದಲ್ಲಿ ಹಾಕಿಟ್ಟು ಕೊಂಡು ಬೆಳಗ್ಗೆ ಮತ್ತು ರಾತ್ರೆ ಮೂಗಿಗೆ ಒಂದು ಡ್ರಾಪ್ ಎರಡು ತಿಂಗಳ ಕಾಲ ಬಿಟ್ಟು ಕೊಂಡರೆ ತಲೆ ನೋವು ಬರೋದಿಲ್ಲ. ಮಧ್ಯ ಬಂತು ಎಂದರು ಈ ಎಣ್ಣೆಯನ್ನು ಮಾಡಿ ಬಿಟ್ಟರೆ ಮರುದಿನವೇ ವಾಸಿ ಆಗುತ್ತೆ.